ವಾಸಿಂ ಆಕ್ರಮ್ ಇವರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಜಗತ್ತಿನ ಅತ್ಯುತ್ತಮ ವೇಗದ ಬೌಲರರಲ್ಲಿ ಒಬ್ಬರು. ಇವರು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇವರು ಎಡಗೈ ವೇಗದ ಬೌಲರರಾಗಿದ್ದರು. ೧೯೯೨ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದ ಇವರು, ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದರು. ಅಂತಿಮ ಪಂದ್ಯದಲ್ಲಿ ಇವರು ೧೯ ಚೆಂಡುಗಳಲ್ಲಿ ೩೩ ಬಾರಿಸಿದ್ದರು ಮತ್ತು ೩ ವಿಕೆಟ್ ಪಡೆದಿದ್ದರು. ೧೯೯೯ರಲ್ಲಿ ವಿಶ್ವ ಕಪ್ ಕ್ರಿಕೆಟ್ನಲ್ಲಿ ಫೈನಲ್ ಪ್ರವೇಶಿಸಿದ ಪಾಕಿಸ್ತಾನ ತಂಡದ ನಾಯಕರಾಗಿದ್ದವರು ವಾಸಿಂ. ಇವರು ತಮ್ಮ ರಿವರ್ಸ್ ಸ್ವಿಂಗ್ ಬೌಲಿಂಗಿಗೆ ಪ್ರಸಿದ್ಧರಾಗಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಇವರ ಮೇಲೆ 'ಪಂದ್ಯ ಹೊಂದಾಣಿಕೆ'ಯ ಆರೋಪ ಹೊರಿಸಲಾಗಿತ್ತು, ಆದರೆ ಆ ಆರೋಪವನ್ನು ಸಾಬೀತು ಪಡಿಸಲಾಗಲಿಲ್ಲ. ಇವರನ್ನು ಚೆಂಡನ್ನು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡಬಲ್ಲವರಾಗಿದ್ದರು, ಅದಕ್ಕೆಂದೇ ಇವರಿಗೆ ಸುಲ್ತಾನ್ ಆಫ್ ಸ್ವಿಂಗ್ ಎಂದು ಕರೆಯುತ್ತಾರೆ. == ದಾಖಲೆಗಳು == ಇವರು ತಮ್ಮ ಟೆಸ್ಟ್ ಜೀವನದಲ್ಲಿ ೨೩.೬೨ರ ಸರಾಸರಿಯಲ್ಲಿ ೪೧೪ ವಿಕೆಟ್ ಕಬಳಿಸಿದ್ದು ಪಾಕಿಸ್ತಾನ್ ಕ್ರಿಕೆಟ್ ತಂಡದ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇವರು ೨೮೯೮ರನ್ನುಗಳನ್ನು ೨೨.೬೪ರ ಸರಾಸರಿಯಲ್ಲಿ ಗಳಿಸಿದ್ದಾರೆ. ೩೫೬ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿದ ಇವರು ವಿಶ್ವ ದಾಖಲೆಯ ೫೦೨ ವಿಕೆಟ್ ಗಳನ್ನು ಪಡೆದಿದ್ದಾರೆ ಮತ್ತು ೧೬.೫೧ಅ ಸರಾಸರಿಯಲ್ಲಿ ೩೭೧೭ರನ್ನುಗಳನ್ನು ಬಾರಿಸಿದ್ದಾರೆ.